ಆಕಾಶಬಳ್ಳಿ -

ಲಾರೇಸಿ ಕುಟುಂಬಕ್ಕೆ ಸೇರಿದ ಇದು ಒಂದು ವಿಶೇಷ ರೀತಿಯ ಪರೋಪಜೀವಿ. ಕೆಸಿತ ಲಾಂಟಾನ, ಕಳ್ಳಿ ಮುಂತಾದ ಗಿಡಗಳ ಮೇಲೆ ಬದನಿಕೆಯಾಗಿ ಬೆಳೆಯುತ್ತದೆ. 20 ಪ್ರಭೇದಗಳುಂಟು. ಪ್ರಮುಖವಾದುದು ಕೆಸಿತ ಫಿಲಿಫಾರಮಿಸ್, ಕಾಂಡದ ಭಾಗ ಎಲೆಗಳಿಲ್ಲದೆ ಹಸಿರಾಗಿದ್ದು ದಾರದಂತಿರುತ್ತದೆ. ಹೂ, ಕಾಯಿ ಮತ್ತು ಹಣ್ಣುಗಳು ಬೇಸಿಗೆಯಲ್ಲಿ ಹೆಚ್ಚು. ಬಳ್ಳಿ ಆಶ್ರಿತ ಮರವನ್ನು ಸುತ್ತಿಕೊಂಡಿರುತ್ತದೆ. ಅಲ್ಲಲ್ಲಿ ಕೆಲವು ವಿಚಿತ್ರ ರೀತಿಯ ಹೀರು ಬೇರುಗಳಿದ್ದು ಅವು ಕೆಲವು ಎನ್‍ಜೈಮ್‍ಗಳನ್ನು ತಯಾರಿಸುತ್ತವೆ. ಈ ಬೇರುಗಳ ಸಹಾಯದಿಂದ ಬಳ್ಳಿಯ ಬೇರುಗಳು ಆಶ್ರಿತ ಮರವನ್ನು ಪ್ರವೇಶಿಸಿ ಸಸ್ಯನಾಳಗಳೊಡನೆ ಕೂಡಿಕೊಂಡು ನೀರು, ಆಹಾರ ಹಾಗೂ ಇತರ ಲವಣಗಳನ್ನು ಆಶ್ರಿತ ಮರಗಳಿಂದ ಪಡೆಯುತ್ತವೆ.

ಆಶ್ರಯದಾತ ಮರದ ಉತ್ತೇಜನ ದೊರೆತಲ್ಲದೆ ಈ ಬಳ್ಳಿಯ ಬೀಜ ಮೊಳೆಯುವುದಿಲ್ಲ ಎಂಬ ನಂಬಿಕೆ ಇದುವರೆಗೂ ಇತ್ತು. ಆದರೆ ಸಂಶೋಧನೆಗಳಿಂದ ಆಶ್ರಯಮರದ ಸಂಪರ್ಕವಿಲ್ಲದೆಯೆ ಕೃತಕವಾಗಿ ಬೆಳೆಯಬಹುದೆಂದು ಈಗ ತಿಳಿದುಬಂದಿದೆ.

ಹಿಂದಿನ ಕಾಲದಲ್ಲಿ ಆಕಾಶಬಳ್ಳಿಯನ್ನು ತಲೆಯ ಪಟ್ಟಿರೋಗ, ಹುಳು ಹುಪ್ಪಟೆ ಮೊದಲಾದುವನ್ನು ನಿವಾರಿಸಲು ಉಪಯೋಗಿಸುತ್ತಿದ್ದರು. ಭಾರತದಲ್ಲಿ ಈ ಗಿಡದ ಪುಡಿಯನ್ನು ಕಲಸಿ ಕೇಶವರ್ಧಕವಾಗಿ ಉಪಯೋಗಿಸುತ್ತಾರೆ. ಗಿಡದ ಪುಡಿಯನ್ನು ಬೆಣ್ಣೆ ಮತ್ತು ಎಳ್ಳೆಣ್ಣೆಯಲ್ಲಿ ಕಲಸಿ ಹುಣ್ಣುಗಳಿಗೆ ಹಚ್ಚುತ್ತಾರೆ. ಆಫ್ರಿಕಾದ ಟಾಂಗನೀಕದ ನೀಗ್ರೊ ಜನ ಶುಕ್ಲದೋಷ (ಗನೋರಿಯ) ನಿವಾರಿಸಲು, ಮೂತ್ರಸ್ರಾವ ತಡೆಯಲು ಇದನ್ನು ಉಪಯೋಗಿಸುತ್ತಾರೆ.

ಗಿಡದ ಪುಡಿಯಿಂದ ಶಕ್ತಿ ಮತ್ತು ವೀರ್ಯವೃದ್ಧಿಯಾಗುವುದೆಂದು ಸಂಸ್ಕøತ ವೈದ್ಯ ಗ್ರಂಥದಲ್ಲಿ ಹೇಳಿದೆ. ಒಣಗಿದ ಕಾಂಡದ ಪುಡಿಯನ್ನು ಪಿತ್ತದೋಷ, ಮೂತ್ರರೋಗ, ಅತಿ ಆಮಶಂಕೆ, ಚರ್ಮರೋಗಗಳಿಗೆ ಉಪಯೋಗಿಸುತ್ತಾರೆ. ಮರಟಿಟಸ್ ಗಿಡದ ಕಷಾಯವನ್ನು ಮಕ್ಕಳ ಮೆತುರೋಗಕ್ಕೆ ಉಪಯೋಗಿಸುತ್ತಾರೆ. 

ಆಕಾಶಬಳ್ಳಿಯಲ್ಲಿ ಲಾರೋಟಿಟಾನಿನ್ (ಅ19ಊ25ಔ4ಓಊ2ಔ) ಎಂಬ ಸಸ್ಯಕ್ಷಾರ ಇರುತ್ತದೆ. ಇದನ್ನು ಉಪಯೋಗಿಸುವದರಿಂದ ಮಾಂಸ ಮತ್ತು ನರಗಳ ಸೆಳೆತ ಬರುವುದಲ್ಲದೆ, ಅತಿ ಹೆಚ್ಚಾದಾಗ ಪ್ರಾಣಕ್ಕೂ ಸಂಚಕಾರವಾಗಬಹುದು. ಆದರೆ ಸಸ್ಯದ ಅಂಟು ದ್ರವದಿಂದ ಅನೇಕ ರೋಗಗಳು ವಾಸಿಯಾಗುತ್ತವೆ. ಡುಲಿಸಿಟಾಲ್ ಎಂಬ ಮತ್ತೊಂದು ಕ್ಷಾರವನ್ನೂ ಗಿಡದಿಂದ ತೆಗೆಯುತ್ತಾರೆ.		
									
(ಡಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ